+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಆನೆಗುಡ್ಡೆಯಲ್ಲಿ ವೈಭವದ ಮಹಾ ಚೌತಿ ಆಚರಣೆ


ಸುಮಾರು 60 ಸಾವಿರ ಭಕ್ತರಿಂದ ಶ್ರೀ ವಿನಾಯಕ ದೇವರ ದರ್ಶನ; 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ

ಕುಂಭಾಸಿ: ದೇವಳದ ಪ್ರಮುಖ ಪರ್ವ ದಿನವಾದ ಮಹಾ ಚೌತಿಯ ಅಂಗವಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಕ್ರಮಗಳೊಂದಿಗೆ ಮಹಾ ಚೌತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.

ಮಹಾ ಚೌತಿಯಂದು ಬೆಳಗಿನ ಜಾವ 4.30ಕ್ಕೆ ಪ್ರಾತಃಕಾಲದ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವಿಶೇಷ ಅಲಂಕಾರದಿಂದ ಕಂಗೊಳಿಸಿದ ಶ್ರೀ ವಿನಾಯಕ ದೇವರಿಗೆ ಲೋಕಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ 1008 ಕಾಯಿಗಳ ಹೋಮ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು.

ದಿನವಿಡೀ ಭಕ್ತರಿಗಾಗಿ ವಿವಿಧ ವಿಶೇಷ ನೈವೇದ್ಯ, ಪ್ರಸಾದ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪರ್ಯಾಯ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. 10,000ಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಅಲ್ಲದೆ, ದಿನವಿಡೀ ಸಾವಿರಾರು ಭಕ್ತರು ಉಚಿತ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.

ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಭಕ್ತರ ನಿರಂತರ ಆಗಮನವಾಗಿದ್ದು, ರಾತ್ರಿ 9.30ರವರೆಗೂ ಭಕ್ತರ ದಟ್ಟಣೆ ಮುಂದುವರಿಯಿತು. ಒಟ್ಟಾರೆ ಸುಮಾರು 60,000ಕ್ಕೂ ಅಧಿಕ ಭಕ್ತರು ಶ್ರೀ ವಿನಾಯಕ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಭಟ್, ಕುಂದಾಪುರ ಪರಿಸರದ ಗಣ್ಯರಾದ ದಿನೇಶ್ ಹೆಗ್ಡೆ, ಮೊಳಹಳ್ಳಿ, ಮಲ್ಯಾಡಿ, ಶಿವರಾಮ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ಸೇರಿದಂತೆ ಹಲವು ಗಣ್ಯರು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಸ್ಥಳಪುರಾಣದ ಭಿತ್ತಿಚಿತ್ರಕ್ಕೆ ಭಕ್ತರ ಮೆಚ್ಚುಗೆ

ಮಹಾ ಚೌತಿಯ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದ್ದ ಆನೆಗುಡ್ಡೆ ಕ್ಷೇತ್ರದ ಸ್ಥಳಪುರಾಣವನ್ನು ಬಿಂಬಿಸುವ ನೂತನ ಭವ್ಯ ಭಿತ್ತಿಚಿತ್ರ ಭಕ್ತರ ಗಮನ ಸೆಳೆಯಿತು. ಮುಂದಿನ ಪೀಳಿಗೆಗೆ ಕ್ಷೇತ್ರದ ಸ್ಥಳಪುರಾಣ, ಪರಂಪರೆ ಹಾಗೂ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಈ ಕಲಾಕೃತಿಯನ್ನು ಭಕ್ತರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದರೊಂದಿಗೆ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಸೇವಾ ಕಿಯೋಸ್ಕ್ ಸೇವೆಯನ್ನೂ ಒದಗಿಸಲಾಗಿದ್ದು, ಭಕ್ತರು ವಿವಿಧ ಸೇವೆಗಳನ್ನು ಸುಲಭವಾಗಿ ಪಡೆದುಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ 3 ಗಂಟೆಯ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಸಂಪ್ರದಾಯಬದ್ಧ ದಶಾವತಾರ ಯಕ್ಷಗಾನ ಪ್ರದರ್ಶನ ನಡೆಯಿತು. ಸಂಜೆ ವಿಶೇಷ ರಂಗಪೂಜೆ, ಸುವರ್ಣ ಪಲ್ಲಕಿ ಉತ್ಸವ ಹಾಗೂ ಅಷ್ಟಾವಧಾನ ಸೇವೆ ನೆರವೇರಿದ ಬಳಿಕ ರಾತ್ರಿ ಪೂಜೆಯೊಂದಿಗೆ ಮಹಾ ಚೌತಿಯ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಭಕ್ತರ ಅಪಾರ ಉಪಸ್ಥಿತಿ ಹಾಗೂ ದಿನವಿಡೀ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸೇವಾ ಕಾರ್ಯಕ್ರಮಗಳಿಂದ ಆನೆಗುಡ್ಡೆ ಕ್ಷೇತ್ರವು ಮಹಾ ಚೌತಿಯಂದು ಹಬ್ಬದ ಸಂಭ್ರಮದಲ್ಲಿ ಕಂಗೊಳಿಸಿತು.